ಚೇಂಬರ್ಸ್, ವಿಲಿಯಂ 1

1723-1796. ಇಂಗ್ಲೆಂಡಿನ ಶಿಲ್ಪ ಶಾಸ್ತ್ರಜ್ಞ ಸ್ವೀಡನ್ನಿನ ಗಾಟನ್‍ಬರ್ಗ್‍ನಲ್ಲಿ ವ್ಯಾಪಾರಿಯೊಬ್ಬನ ಮಗನಾಗಿ ಹುಟ್ಟಿದ ಈತ ಇಂಗ್ಲೆಂಡಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಸ್ವೀಡಿಷ್ ಈಸ್ಟ್ ಇಂಡಿಯ ಕಂಪನಿ ಸೇರಿ ಅನೇಕ ಬಾರಿ ಸಮುದ್ರಯಾನಗಳನ್ನು ಮಾಡಿದ. 1749ರಲ್ಲಿ ರೋಮ್ ಮತ್ತು ಪ್ಯಾರಿಸ್‍ಗಳಲ್ಲಿ ಶಿಲ್ಪಶಾಸ್ತ್ರಾಭ್ಯಾಸ ಮಾಡಿ ಇಂಗ್ಲೆಂಡಿಗೆ ಮರಳಿ ವೇಲ್ಸ್‍ನ ರಾಜಕಾಮಾರನಿಗೆ (3ನೆಯ ಜಾರ್ಜ್) ಅದನ್ನು ಬೋಧಿಸಿದ. ಚೀನದ ಕ್ಯಾಂಟನ್ ಎಂಬಲ್ಲಿಗೆ ಪ್ರಯಾಣ ಮಾಡಿ ಬಂದು ಡಿಸೈನ್ಸ್ ಆಫ್ ಚೈನೀಸ್ ಬಿಲ್ಡಿಂಗ್ಸ್ (1757) ಎಂಬ ಪುಸ್ತಕವನ್ನು ಬರೆದ. ಮುಂದೆ ಇಂಗ್ಲೆಂಡಿನ ದೊಡ್ಡ ಶಿಲ್ಪ ಶಾಸ್ತ್ರಜ್ಞನಾಗಿ, 1788ರಲ್ಲಿ ರಾಯಲ್ ಅಕೆಡಮಿಯನ್ನು ಸ್ಥಾಪಿಸಲು ನೆರವಾದ. 1771ರಲ್ಲಿ 3ನೆಯ ಜಾರ್ಜ್ ದೊರೆ ಈತನಿಗೆ ಸರ್ ಪದವಿಯನ್ನು ಕೊಟ್ಟು ಗೌರವಿಸಿದ.

ಸಾಮರ್‍ಸೆಟ್ ಹೌಸ್, ಡಬ್ಸಿನ್ ಬಳಿ ಇರುವ ಕ್ಯಾಸಿನೊ ಮ್ಯಾರಿನೊ, ಕ್ಯೂ ಪ್ಯಾಲೇಸ್, ಸರೆ ನಗರದ ಹಲವು ಅಲಂಕಾರಿಕ ಕಟ್ಟಡಗಳ-ಇವು ಈತನ ಮುಖ್ಯ ಕಲಾಕೃತಿಗಳಲ್ಲಿ ಹೆಸರಿಸತಕ್ಕವು. ಕೊನೆ ಕೊನೆಯಲ್ಲಿ ಎಲ್ಲ ಪಂಥಗಳಿಂದಲೂ ತನಗೆ ಸರಿತೋರಿದುದನ್ನು ಆಯ್ದುಕೊಳ್ಳುವ ರೊಮ್ಯಾಂಟಿಕ್ ಗತಿಗೆ ವಾಲಿದನಾದರೂ ಈತ ಮುಖ್ಯವಾಗಿ ಯೂರೋಪಿನ ಅದರಲ್ಲೂ ಫ್ರಾನ್ಸಿನ ಶಿಲ್ಪಕಲೆಯನ್ನು ಬಹುವಾಗಿ ಉಪಯೋಗಿಸಿಕೊಂಡ ಸಂಪ್ರದಾಯಬದ್ಧ ಶಿಲ್ಪಶಾಸ್ತ್ರಜ್ಞನೆನಿಸಿಕೊಂಡಿದ್ದಾನೆ. ಎ ಟ್ರಿಟೀಸ್ ಆನ್ ಸಿವಿಲ್ ಆರ್ಕಿಟೆಕ್ಚರ್ (1759) ಎಂಬ ಪುಸ್ತಕ ಈತ ಶಿಲ್ಪಶಾಸ್ತ್ರದ ಮೇಲೆ ಬರೆದ ಉದ್ಗ್ರಂಥವಾಗಿದೆ. ಮಿನ್‍ಸ್ಟರ್ ಅಬೆಯಲ್ಲಿ ಈತನ ಸಮಾಧಿ ಇದೆ.
(ಎನ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ